ಕಲಘಟಗಿ ಮತಕ್ಷೇತ್ರದ ಕಮಲಕ್ಕೆ ಅಧಿಪತಿಯಾಗುವತ್ತ ಛಬ್ಬಿ ಚಿತ್ತವೆ ❓️
Author : Vinayak M Bhat
ವಿಶೇಷ ವರದಿ ವಿನಾಯಕ ಭಟ್ ಹುಲ್ಲಂಬಿ
ಹೊಸ ಮನೆಯ ಮತ್ತು ಕಾರ್ಯಾಲಯದ ಗುದ್ದಲಿ ಪೂಜೆ ನೆರವೇರಿಸಿದ ನಾಗರಾಜ ಛಬ್ಬಿ.
ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಜಂಗ್ಲಿ ಬಸವಣ್ಣ ಗುಡಿ ಹತ್ತಿರ ಸ್ವಂತ ಮನೆ ಹಾಗೂ ಕಾರ್ಯಾಲಯದ ಕಟ್ಟಡಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಭೂಮಿ ಪೂಜೆ ನೆರವೇರಿಸಿದರು.
ಅನೇಕ ವರ್ಷಗಳಿಂದ ಕಲಘಟಗಿ ಮತಕ್ಷೇತ್ರ-75 ಹೊರಗಿನ ಅಭ್ಯರ್ಥಿಗಳಿಂದಲೇ ಅಭಿವೃದ್ಧಿಯ ಕನಸು -ನನಸಿನಲ್ಲಿ ಸಾಗುತ್ತಿದೆ. ಜನತಾ ದಳದಿಂದ ಪಿ ಸಿ ಸಿದ್ದನಗೌಡ್ರ ಪಕ್ಷೇತರರಾಗಿ ದಿ.ಫಾ| ಜೇಕಬ್ ಪಿ ಜೆ, ಬಿಜೆಪಿಯಿಂದ ಎಸ್ ಅಯ್ ಚಿಕ್ಕನಗೌಡ್ರ ಹೀಗೆ ಈ ಕ್ಷೇತ್ರ ವಿಚಿತ್ರ – ವಿಭಿನ್ನವಾಗಿ ಕಾಣುತ್ತದೆ. ಹುಬ್ಬಳ್ಳಿ ತಾಲೂಕಿನ ಪಿ ಸಿ ಸಿದ್ದನಗೌಡ್ರನ್ನು ಜವಳಿ ಮತ್ತು ಸಕ್ಕರೆ ಸಚಿವರನ್ನಾಗಿ ಕಳಿಸಿದ ಹೆಗ್ಗಳಿಕೆಯೂ ಈ ಕ್ಷೇತ್ರಕ್ಕಿದೆ.
ಕಲಘಟಗಿ ಮತಕ್ಷೇತ್ರದ ಶಾಸಕನಾಗುವ ಹೆಬ್ಬಯಕೆಯ ಛಬ್ಬಿ : 2008 ರ ಪೂರ್ವದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ತಾಲೂಕಿನ ಜನ ಮನ ಗೆದ್ದ ಸೌಜನ್ಯದ ರಾಜಕಾರಣಿ. ಅದೇನಾಯಿತೋ ಏನೋ 2008 ರಲ್ಲಿ ಪಕ್ಷದ ಅಣತಿಯಂತೆ 2008 ರಲ್ಲಿ ಹೊಸ ಬೆಳಕಿನಂತೆ ಬಂದ ಸಂತೋಷ ಲಾಡ್ ಅವರಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟದ್ದು ಇತಿಹಾಸ. ಮುಗ್ಧ ಮತದಾರರು ಲಾಡ್ ಅವರಿಗೆ 3 ಬಾರಿ ಗೆಲ್ಲಿಸಿ 2 ಬಾರಿ ಸಚಿವರಾಗುವ ಭಾಗ್ಯ ದೊರಕಿಸಿಕೊಟ್ಟರು. ಹೋರಾಟಗಾರರು ಹಾಗೂ ಶಿಕ್ಷಕ ವೃತ್ತಿ ಬಿಟ್ಟು ರಾಜಕೀಯ ಪ್ರವೇಶಿಸಿ 28 ವರ್ಷಗಳ ಹೋರಾಟದಿಂದ ಲಾಡ್ ಅವರನ್ನು ಸೋಲಿಸಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ ಕೀರ್ತಿ ದಿ|ಸಿ ಎಂ ನಿಂಬಣ್ಣನವರಿಗೆ ಹಾಗೂ ಮತದಾರರಿಗೆ ಸಲ್ಲುತ್ತದೆ.
ಇತಿಹಾಸ ಮರುಕಳಿಸುತ್ತಿದೆಯಾ ❓️ಸೋಲು ಗೆಲುವು ಇದ್ದದ್ದೇ. ಮೂಲತಃ ಕಲಘಟಗಿ ಕ್ಷೇತ್ರದವರಾಗಿದ್ದರೂ ಹುಬ್ಬಳ್ಯಾಗ ಇರ್ತಾರ್ರಿ ಎನ್ನುವ ಮಾತಿದ್ದರೂ ಕ್ಷೇತ್ರದ ಸೇವೆ ಸಂಬಂಧ ಬಿಟ್ಟಿಲ್ಲ. ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದಿದ್ದಾಗ ಕೇಂದ್ರ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಹಾಗೂ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ಬಿಜೆಪಿ ಪಕ್ಷದ ಟಿಕೆಟ್ ಪಡೆದು ಸಚಿವ ಲಾಡ್ ವಿರುದ್ಧ ಕೇವಲ 14,357 ಅಂತರದಲ್ಲಿ ಸೋಲು ಅನುಭವಿಸಿದರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಕಳೆದ ಲೋಕಸಭೆ ಚುನಾವಣೆಯಲ್ಲಿ ರಣಬಿಸಿಲು, ಹಗಲು ರಾತ್ರಿ ಲೆಕ್ಕಿಸದೆ ಈ ಕ್ಷೇತ್ರದಿಂದ ಮಾನ್ಯ ಜೋಶಿ ಅವರಿಗೆ 32,737 ಹೆಚ್ಚಿನ ಮತ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಹೊರಗಿನವರು ಎಂಬ ಕೂಗಿಗೆ ಪೂರ್ಣ ವಿರಾಮ ನೀಡಲು ಮನೆ ಕಟ್ಟುವುದರೊಂದಿಗೆ ಕ್ಷೇತ್ರದ ಮನ ಗೆಲ್ಲಲು ಮುಂದಾಗಿರುವುದರಲ್ಲಿ ಸಂಶಯವಿಲ್ಲಾ.

ಈ ಸಂದರ್ಭದಲ್ಲಿ ಕಲಘಟಗಿ ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ್, ಗೀತಾ ಮರಲಿಂಗಣ್ಣನವರ, ಜ್ಯೋತಿ ಛಬ್ಬಿ, ಬಿಜೆಪಿ ಮುಖಂಡ ಶಶಿಧರ್ ನಿಂಬಣ್ಣವರ, ಮಾಜಿ ಜಿ ಪಂ ಸದಸ್ಯ ಅಯ್ ಸಿ ಗೋಕುಲ್, ಗುರುನಾಥ ಎಸ್ ದಾನೇಣ್ಣವರ, ನೀಲಕಂಠಗೌಡ ಪಾಟೀಲ್, ಭೀಮಣ್ಣ ಗಾಣಗೇರ, ವಿಜಯಲಕ್ಷ್ಮಿ ಆಡಿನವರ, ಹಾಗೂ ಸಾವಿರಾರು ಛಬ್ಬಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಶುಭ ಹಾರೈಸಿದ ಜೋಶಿ
ಮೋದಿ 3.0 ಪ್ರಮಾಣ ವಚನದ ದಿನದವೇ ತಮ್ಮ ಕಾರ್ಯ ಪ್ರಾರಂಭ ಆಗಿದ್ದು ಸಂತೋಷವಾಗಿದೆ.














